ಕೇರಳ ಟೈಮ್ಸ್		

ಕೇರಳದ ಒಂದು ದಿನಪತ್ರಿಕೆ. 1957ರ ಅಕ್ಟೋಬರ್ 2ರಂದು ಆರಂಭವಾಯಿತು. ಕೊಚ್ಚಿಯ ಹಿಂದುಳಿದ ಕರಾವಳಿ ಪ್ರದೇಶದಹಿತ ಸಾಧನೆಯೇ ಇದರ ಸ್ಥಾಪನೆಯ ಮುಖ್ಯ ಉದ್ದೇಶ. ಹಿಂದೆ ಇದ್ದ ತಿರುವಾಂಕೂರು-ಕೊಚ್ಚಿ ಸರ್ಕಾರದ ನಿವೃತ್ತ ಕಾರ್ಯದರ್ಶಿ ಓ.ಪಿ. ಚುಮ್ಮರ್ ಮತ್ತು ಇನ್ನು ಕೆಲವರ ಪ್ರಯತ್ನದ ಫಲವಿದು.

	ಪತ್ರಿಕೆಗೆ ಧನಪೋಷಣೆ ಮಾಡಲು ನಿರ್ಮಲಾ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ಎಂಬ ಸಾರ್ವಜನಿಕ ಪರಿಮಿತ ಹೊಣೆ ಕಂಪನಿಯನ್ನು ಸ್ಥಾಪಿಸಲಾಗಿತ್ತು. ಇದು 1959ರಲ್ಲಿ ಅವಸಾನ ಹೊಂದಿತು. ಆದರೆ ಪತ್ರಿಕೆ ಕೊನೆಗೊಳ್ಳಲಿಲ್ಲ. ಇದರಲ್ಲಿ ಆಸಕ್ತಿ ತಳೆದಿದ್ದ ಕೆಲವು ವಿದ್ಯಾವಂತ, ಕೇರಳೀಯರು ಒಂದಾಗಿ ಸೇರಿ, 'ಕೇರಳ ಸಾಂಸ್ಕøತಿಕ ಸಂಘ, ಪರಿಮಿತ ಎಂಬ ಲಾಭೋದ್ದೇಶರಹಿತ ಸಂಘವೊಂದನ್ನು ಸ್ಥಾಪಿಸಿಕೊಂಡು, ಅದರ ಪ್ರಕಟಣೆಯನ್ನು ವಹಿಸಿಕೊಂಡರು. ಸಂಘಕ್ಕೆ ವೇರಾಪೊಲಿಯ ಆಗಿನ ಆರ್ಚ್‍ಬಿಷಪರು ಪೋಷಕರಾದರು.

	ಕೇರಳ ಟೈಮ್ಸ್ ಜಾತ್ಯತೀತ ಪ್ರಜಾಸತ್ತೆಗೆ ಮುಡಿಪಾದ ಸ್ವತಂತ್ರ ರಾಷ್ಟ್ರೀಯ ಪತ್ರಿಕೆಯೆಂದು ಘೋಷಿಸಿಕೊಂಡಿದೆ. ಅದು ಯಾವ ಪಕ್ಷದ ಪರವನ್ನೂ ವಹಿಸದಿದ್ದರೂ ಸ್ಥೂಲವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಕಾರ್ಯನೀತಿಯನ್ನು ಅನುಸರಿಸಿಕೊಂಡು ಬರುತ್ತಿದೆ. ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿದೆ.

	ಪತ್ರಿಕೆ ಸ್ಪರ್ಧೆಯನ್ನೆದುರಿಸಬೇಕಾಗಿದ್ದರೂ ತನ್ನ ಪ್ರಸಾರವನ್ನು ಕ್ರಮವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಜೇಕಬ್ ಕಿತು, ಕೆ.ಜಿ. ಆಂತೋಣಿ, ಎಂ.ಎಲ್. ಜೋಸೆಫ್-ಇವರು ಕಾಲಾನುಕ್ರಮವಾಗಿ ಇದರ ಸಂಪಾದಕರು. 				
	(ಕೆ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ